ಕಾಸ್ಟರೀಕ

 ಮಧ್ಯ ಅಮೆರಿಕದ ಒಂದು ಗಣರಾಜ್ಯ. ಉತ್ತರದಲ್ಲಿ ನಿಕರಾಗ್ವ, ಪೂರ್ವದಲ್ಲಿ ಕ್ಯಾರಿಬೀಯನ್ ಸಮುದ್ರ, ದಕ್ಷಿಣದಲ್ಲಿ ಪನಾಮಾ ರಾಜ್ಯ ಮತ್ತು ಪಶ್ಚಿಮಕ್ಕೆ ಪೆಸಿಫಿಕ್ ಸಾಗರ ಇವೆ. ವಿಸ್ತೀರ್ಣ 19,652 ಚ.ಮೈ. ಮಧ್ಯ ಅಮೆರಿಕದ ಅತ್ಯಂತ ಕಿರಿಯ ರಾಷ್ಟ್ರಗಳಲ್ಲಿ ಇದು ಎರಡನೆಯದು (ಇದಕ್ಕಿಂತ ಕಿರಿಯದು ಎಲ್ ಸ್ಯಾಲ್ವಡಾರ್). ಜನಸಂಖ್ಯೆ 13,36,274 (1963). ರಾಜಧಾನಿ ನಾಸ್ ಓಸೇ.

 ಭೂರಚನೆ : ಕಾಸ್ಟ ರೀಕದ ಓಸ ಮತ್ತು ನಿಕೋಯ ಎಂಬ ಎರಡು ಹಿರಿಯ ಪರ್ಯಾಯದ್ವೀಪಗಳಲ್ಲಿ ಸಂಮಿಶ್ರ ಸ್ವಭಾವದ, ಎರಡನೆ ಭೂಯುಗದ ರೂಪಪರಿವರ್ತಿತ ಬಂಡೆಗಳಿವೆ. ಈ ಪರ್ಯಾಯ ದ್ವೀಪಗಳ ತಳಪ್ರದೇಶ, ನೈಋತ್ಯ ತೀರಪ್ರದೇಶ, ರೀಯೊ ಡಿ ಟೆರ್ರಬ ನದಿಯ ಜಲಾನಯನ ಭೂಮಿ ಹಾಗೂ ಪೆಸಿಫಿಕ್ ಸಾಗರದ ಕಡೆಯ ತಗ್ಗುಪ್ರದೇಶ-ಇವು ತೃತೀಯ ಭೂಯುಗದ ಶಿಲೆಗಳಿಂದ ಕೂಡಿವೆ. ಅಗ್ನಿಪರ್ವತಗಳ ಅಪಾರ ಬೂದಿಯೂ ಹರಡಿದೆ. ಈ ರಾಜ್ಯದ ವಾಯುವ್ಯದಲ್ಲಿ ಅನೇಕ ಸುಪ್ತ ಅಗ್ನಿಪರ್ವತಗಳುಳ್ಳ ವಾಲ್ಕಾನಿಕ ಪರ್ವತಶ್ರೇಣಿಗಳಿವೆ. ಅವುಗಳ ಪಾಶ್ರ್ವಗಳಲ್ಲಿ ಜ್ವಾಲಾಮುಖಿಗಳಿಂದೆದ್ದ ರಾಸಾಯನಿಕ ವಸ್ತುಗಳೂ, ಮಿಯೋಸೀನ್ ಯುಗದ ಸಮುದ್ರದಷ್ಟೂ ಹರಡಿಕೊಂಡಿವೆ. ಅಲ್ಲಿಯ ಅಗ್ನಿಪರ್ವತಗಳು 4,500'-6,627' ಎತ್ತರಕ್ಕಿವೆ; ಅವುಗಳಲ್ಲಿ ಮಿರಾವಾಲೆಸ್ ಅಗ್ನಿಪರ್ವತವೇ ಅತ್ಯಂತ ಎತ್ತರವಾದ್ದು (6,627'). ರಾಜ್ಯದ ಆಗ್ನೇಯ ಭಾಗದಲ್ಲಿ ವಿಶಾಲವಾಗಿ ಹರಡಿರುವ ಕಾರ್ಡೆಯೇರಾ ದೆ ತಲಮಾಂಕಾ ಪರ್ವತ ಶ್ರೇಣಿಗಳಲ್ಲಿ ಮಿಯೋಸೀನ್-ಓಲಿಗೋಸೀನ್ ಯುಗದ ಕಲ್ಲುಂಡೆಗಳೂ ಜೇಡಿಪದರಕಲ್ಲುಗಳೂ ಮರಳುಗಲ್ಲುಗಳೂ ಜ್ವಾಲಾಮುಖಿಗಳಿಂದ ಹೊರಸುರಿದ ವಸ್ತುಗಳೂ ಇವೆ. ಈ ಪರ್ವತ ಶ್ರೇಣಿಯಲ್ಲಿ ಅತ್ಯಂತ ಎತ್ತರವಾದ ಶಿಖರ ಚೀರ್ರಿಪೋ ಗ್ರಾಂಡೆ (12,533') ಕಾರ್ಡೆಯೇರಾ ಸೆಂಟ್ರಲ್ ಪರ್ವತಶ್ರೇಣಿಯ ಮೂರನೆಯ ಭೂಯುಗದ ಅಗ್ನಿಪರ್ವತಗಳಿವೆ; ಅವುಗಳಲ್ಲಿ ಹಲವು ಸುಪ್ತವಾಗಿವೆ. ಮುಖ್ಯವಾದವು ಪೊವಾಸ್ (8,875'), ಬಾರ್ಪ, (9,533) ಟೂರ್ಯಾಲ್ವಾ (10,919') ಮತ್ತು ಇರಾಜೂ (11,260'). ಕಾರ್ಡಿಯೇರಾ ಸೆಂಟ್ರಲ್ ಪರ್ವತಗಳ ಪಶ್ಚಿಮದಲ್ಲಿ ಮೆಸೇಟಾ ಸೆಂಟ್ರಲ್ ಪರ್ವತ ಸಾಲುಗಳಿವೆ. ಸೀಮೆ ಸುಣ್ಣದಂಥ ಮೃದುಶಿಲೆಗಳು, ಜ್ವಾಲಾಮುಖಿಯ ಲಾವ ಮತ್ತು ಬೂದಿ ಅಲ್ಲಿ ಹರಡಿಕೊಂಡಿವೆ. ನಾಡಿನ ಈಶಾನ್ಯ ಭಾಗದಲ್ಲಿ ಮಿಯೋಸೀನ್-ಓಲಿಗೋಸೀನ್ ಯುಗದ ಮರಳುಗಲ್ಲು, ಜೇಡಿಪದರಗಲ್ಲು, ಸುಣ್ಣಕಲ್ಲು ಹಾಗೂ ಇತ್ತೀಚಿನ ಮೆಕ್ಕಲು ಮಣ್ಣಿನ ಗುಡ್ಡೆಗಳಿವೆ.

 ನದಿಗಳು : ಕಾಸ್ಟರೀಕ ರಾಜ್ಯದ ಪೂರ್ವ ಮೈದಾನಗಳಲ್ಲಿ ಅನೇಕ ದೊಡ್ಡ ನದಿಗಳು ಹರಿದು ಕ್ಯಾರಿಬೀಯನ್ ಸಮುದ್ರವನ್ನು ಸೇರುತ್ತವೆ. ಸಿಕ್ಸಾಮೋಲ ನದಿ ತನ್ನ ಹರವಿನಲ್ಲಿ ಸ್ವಲ್ಪದೂರ ಅಂತರರಾಷ್ಟ್ರೀಯ ಗಡಿಯಾಗಿ ಪರಿಣಮಿಸುತ್ತದೆ. ರೆವೆಂಟ ಜೋನ್ ನದಿ ಇರಜೂ ಜ್ವಾಲಾಮುಖಿ ಪರ್ವತದಲ್ಲಿ ಉದ್ಭವಿಸಿ ಪೂರ್ವಾಭಿಮುಖವಾಗಿ ಕ್ಯಾರಿಬೀಯನ್ ಸಮುದ್ರದತ್ತ ತಿರುಗುವುದಕ್ಕೆ ಮುಂಚೆ ಮೆಸೇಟಾ ಸೆಂಟ್ರಲ್ ಪ್ರಸ್ಥಭೂಮಿಯ ಪೂರ್ವಭಾಗದಲ್ಲಿ ಬಸಿದುಹೋಗುತ್ತದೆ. ಚೀರ್ರಿಪೋ ನದಿಯೂ ಅದೇ ಪರ್ವತದಲ್ಲಿ ಹುಟ್ಟುತ್ತದೆ. ಆರೆನಾಲ್-ಸಾನ್ ಕಾರ್ಲಾಸ್ ನದಿ ಕಾರ್ಡೆಯೇರಾ ವಾಲ್ಕಾನಿಕ ಪರ್ವತಶ್ರೇಣಿಗಳ ಪಶ್ಚಿಮದಲ್ಲಿರುವ ಆರೆನಾಲ್ ಸರೋವರದಲ್ಲಿ ಹುಟ್ಟಿ ಸಾನ್ ವಾನ್ ನದಿಯನ್ನು ಕೂಡುತ್ತದೆ. ತನ್ನ ಹರವಿನಲ್ಲಿ ಸ್ವಲ್ಪ ದೂರ ಅಂತರರಾಷ್ಟ್ರೀಯ ಗಡಿಯಾಗಿರುವ ಸಾನ್ ವಾನ್ ನದಿ ನೌಕಾಸಂಚಾರಕ್ಕೆ ಯೋಗ್ಯವಾಗಿದೆ. ಗ್ರಾಂಡೆ ದೆ ಟಿರ್ರಾಬ, ಮೆಸೆಟಾ ಸೆಂಟ್ರಲ್ ಪ್ರಸ್ಥಭೂಮಿಯಲ್ಲಿ ಬಸಿದು ಹೋಗುವ ಗ್ರಾಂಡೆ ಡೆ ಟಾರೇಕ್ಲೋಸ್ ಮತ್ತು ಗುನಾಕಾಸ್ಟೆ ತಗ್ಗುಭೂಮಿಯಲ್ಲಿ ಬಸಿದುಹೋಗುವ ಟೆಂಪಿಸ್ಕ್ಯು-ಇವು ಪೆಸಿಫಿಕ್ ಸಾಗರವನ್ನು ಸೇರುವ ಹಿರಿಯ ನದಿಗಳು.

 ವಾಯುಗುಣ : 3,000' ಗಿಂತ ಕಡಿಮೆ ಎತ್ತರದ ಪ್ರದೇಶಗಳಲ್ಲಿ ವಾರ್ಷಿಕ ಮಧ್ಯಕ ಉಷ್ಣತೆ 80o ಫ್ಯಾ. 3,000' ಗಿಂತ ಹೆಚ್ಚು ಎತ್ತರದಲ್ಲಿ 74o ಫ್ಯಾ; 5,000' ಎತ್ತರದಲ್ಲಿ 59o ಫ್ಯಾ. 3,806' ಎತ್ತರದಲ್ಲಿರುವ ರಾಜಧಾನಿ ಸಾನ್ ಓಸೇಯಲ್ಲಿ ವಾರ್ಷಿಕ ಮಧ್ಯಕ ಉಷ್ಣತೆ 67o  ಫ್ಯಾ. ಇರುತ್ತವೆ. ಭೂಮಟ್ಟ ಮತ್ತು ಈಶಾನ್ಯ ವಾಣಿಜ್ಯ ಮಾರುತಗಳನ್ನು ಅವಲಂಬಿಸಿ ಮಳೆಯಾಗುತ್ತದೆ. ಕೆಲವು ಕಡೆ ವಾರ್ಷಿಕ ಮಳೆಯ ಪ್ರಮಾಣ 200"ಗಿಂತ ಹೆಚ್ಚಾಗಿರುತ್ತದೆ. ಈಶಾನ್ಯದ ಮೈದಾನ ಮತ್ತು ಪರ್ವತ ಪ್ರದೇಶಗಳಲ್ಲಿ 50"-80" ಮಳೆಯಾಗುತ್ತದೆ; ಅಲ್ಲಿ 5 ತಿಂಗಳುಗಳ ಕಾಲ ಒಣ ಹವೆ. ಆಗ್ನೇಯ ಮೈದಾನ ಮತ್ತು ಪರ್ವತ ಪ್ರದೇಶಗಳಲ್ಲಿ ಮಳೆ 80"-130". ಮೂರು ತಿಂಗಳೂ ಒಣ ಹವೆ.

 ಸಸ್ಯಗಳು : ಕಾಸ್ಟ ರೀಕದ ಸ್ವಾಭಾವಿಕ ಸಸ್ಯಗಳಲ್ಲಿ ಐದು ಬಗೆಯ ಅರಣ್ಯಗಳು ಹಾಗೂ ಮೂರು ಬಗೆಯ ಹುಲ್ಲುಗಾವಲುಗಳಿವೆ. ಎರಡು ಬಗೆಯ ಅರಣ್ಯಗಳು ಸಾಮಾನ್ಯವಾದವು: ಕ್ಯಾರಿಬೀಯನ್ ಸಮುದ್ರ ಮತ್ತು ಪೆಸಿಫಿಕ್ ಸಾಗರದ ಕಡೆಗಳಲ್ಲಿರುವ ಸಿಹಿನೀರು ಮತ್ತು ಉಪ್ಪುನೀರಿನ ಜೌಗು ಪ್ರದೇಶಗಳಲ್ಲಿ ತೆಂಗು ಹಾಗೂ ತೊಗಟೆಮರಗಳು ಬೆಳೆಯುತ್ತವೆ. ನಿತ್ಯಹಸುರಿನ ಅರಣ್ಯಗಳು ದೇಶದ ಸೇ. 60 ರಷ್ಟು ಪ್ರದೇಶವನ್ನು ಆವರಿಸಿವೆ. ಇವುಗಳಲ್ಲಿ ಸ್ವಲ್ಪಭಾಗವನ್ನು ಕಡಿದು ವ್ಯವಸಾಯಕ್ಕೂ ಬಾಳೆ ತೋಟಗಳಿಗೂ ರೈಲುಮಾರ್ಗ ಹಾಕುವುದಕ್ಕೂ ಉಪಯೋಗಿಸಿಕೊಂಡಿದ್ದಾರೆ. ಕಾರ್ಡೆಯೇರಾ ದೆ ತಲಮಾಂಕಾ ಪರ್ವತಗಳ ಪೂರ್ವ ಇಳಿಜಾರುಗಳಿಂದ ಓಸಾ ಪರ್ಯಾಯದ್ವೀಪದವರೆಗೆ ವ್ಯಾಪಿಸಿರುವ ಅರಣ್ಯಗಳಲ್ಲಿ 1,000ಕ್ಕೂ ಹೆಚ್ಚು ಬಗೆಯ ವೃಕ್ಷಗಳು ಯಥೇಚ್ಚವಾಗಿ ಬೆಳೆದಿವೆ. ಅಲ್ಲಿಯ ಮರಗಳಲ್ಲಿ ದೇವದಾರು, ಲಿಗ್ನಂ ವಿಟೇ, ಬಾಲ್ಸ, ಕರಿಮರ, ರಬ್ಬರ್, ಬ್ರಜಿûಲ್‍ವುಡ್-ಇವು ಮುಖ್ಯವಾದವು. 10,000' ಎತ್ತರದ ಪ್ರದೇಶಗಲ್ಲಿ ಓಕ್ ಮರಗಳೂ ಆಲ್ಪ್ಸ್ ಪರ್ವತಗಳಲ್ಲಿರುವ ಮಾದರಿಯ ಹುಲ್ಲುಗಾವಲುಗಳೂ ಇವೆ.  ವಾಯವ್ಯದ ಒಣಹವೆಯ ತಗ್ಗು ಭೂಮಿಗಳಲ್ಲಿ ಉಷ್ಣವಲಯದ ಅರಣ್ಯಗಳೂ ಸವಾನ ಹುಲ್ಲುಗಾಡುಗಳೂ ಇವೆ. ಅನೇಕ ಬಗೆಯ ಔಷಧ ಮೂಲಿಕೆಗಳು ಅರಣ್ಯಗಳಲ್ಲಿ ಸಿಗುತ್ತವೆ.

 ಪ್ರಾಣಿಗಳು : ಕಾಸ್ಟ ರೀಕದ ಅರಣ್ಯಗಳಲ್ಲಿ ಸಾರಗ, ಅಳಿಲು, ಒಪಾಸಂ, ಟೇಪಿಯರ್, ಮುಳ್ಳುಹಂದಿ, ಮೊಸಳೆ; ಇಗ್ವಾನ, ವಿವಿಧ ಬಗೆಯ ಹಾವು, ಆಮೆ, ಅನೇಕ ಜಲಚರ ಪಕ್ಷಿಗಳು, ಪರಿಸರಕ್ಕೆ ಹೋಲುವ ಬಣ್ಣವುಳ್ಳ ಪಕ್ಷಿಗಳು, ಜೀರುಂಡೆ, ಬಾವಲಿ-ಮೊದಲಾದವು ಜೀವಿಸುತ್ತವೆ. ಪೆಸಿಫಿಕ್ ಸಾಗರತೀರದಲ್ಲಿ ಟುನಾ, ಕತ್ತಿ ಮೀನು, ಹಂದಿಮೀನು, ಷಾರ್ಕ್, ಸೀಗಡಿ ಮೊದಲಾದವು ಸಿಗುತ್ತವೆ.

 ಇತಿಹಾಸ : ಕೊಲಂಬಸ್ ತನ್ನ ನಾಲ್ಕನೆಯ ಮತ್ತು ಕೊನೆಯ ಕಡಲಯಾನದಲ್ಲಿ ಕಾಸ್ಟ ರೀಕ ದೇಶವನ್ನು ಕಂಡುಹಿಡಿದ. ಆ ಹೆಸರನ್ನು ಕೊಟ್ಟವನೂ ಅವನೇ ಎಂದು ಕಾಣುತ್ತದೆ. ಇಲ್ಲಿಯ ಜನ ಧರಿಸಿದ್ದ ಆಭರಣಗಳನ್ನು ನೋಡಿದ ಸ್ಪ್ಯಾನಿಷ್ ನಾವಿಕರು ಕ್ಯಾರಿಬೀಯನ್ ತೀರದಲ್ಲಿ ಹೇರಳವಾಗಿ ಚಿನ್ನ ಸಿಗುವುದೆಂದು ಭಾವಿಸಿ ಈ ನಾಡಿಗೆ ಕಾಸ್ಟ ರೀಕ ಅಥವಾ ಶ್ರೀಮಂತ ಕಡಲಂಚು ಎಂದು ಹೆಸರಿಸಿದರು. ಈ ದೇಶವನ್ನು ಕಂಡುಹಿಡಿದ ಕೂಡಲೆ ಇಲ್ಲಿ ವಸಾಹತು ಸ್ಥಾಪಿಸಲು ಸ್ಪೇನ್ ಮಾಡಿದ ಯತ್ನ ವಿಫಲಗೊಂಡಿತು. ವಲಸೆಗಾರರಿಗೆ ಇಂಡಿಯನ್ ಜನರಿಂದ ಅಪಾರ ಸಾವುನೋವುಗಳು ಸಂಭವಿಸಿದುವು.

 ಮೊದಮೊದಲು ಈ ದೇಶಕ್ಕೆ ನೂವ ಕಾರ್ಟಾಗೊ ಎಂಬ ಹೆಸರು ಇತ್ತು. 1540 ರಿಂದ ಕಾಸ್ಟ ರೀಕ ಎಂಬ ಹೆಸರನ್ನು ಸಾಮಾನ್ಯವಾಗಿ ಅಂಗೀಕರಿಸಲಾಗಿದೆ. ಆಗಿನಿಂದ ಅದು ಸ್ಪೇನ್ ದೇಶದ ಪ್ರಾಂತ್ಯವಾಯಿತು. ಅದರ ರಾಜ್ಯಪಾಲನಾಗಿದ್ದ ವಾನ್ ವಾಸ್‍ಕ್ವೆeóï ಕಾರೊನಾಡೋ 1560-1573ರಲ್ಲಿ ಅದರ ಗಡಿಗಳನ್ನು ನಿರ್ಧರಿಸಿದ. ಬಹು ದೀರ್ಘಕಾಲ ಸ್ಪೇನ್ ದೇಶದ ದಬ್ಬಾಳಿಕೆಗೆ ಒಳಗಾಗಿದ್ದ ಜನ ಬಡತನದಿಂದ ನೊಂದಿದ್ದರು. ಮೆಕ್ಸಿಕೋ ದೇಶ ಸ್ಪೇನಿನ ದಬ್ಬಾಳಿಕೆಯ ವಿರುದ್ಧ ದಂಗೆಯೆದ್ದು ಸ್ವಾತಂತ್ರ್ಯ ಪಡೆಯಿತೆಂಬ ವಾರ್ತೆ ಹರಿದೊಡನೆಯೇ ಮಧ್ಯ ಅಮೆರಿಕದ ಇತರ ರಾಜ್ಯಗಳಂತೆ ಕಾಸ್ಟ ರೀಕವೂ 1821ರ ಸೆಪ್ಟೆಂಬರ್ 15ರಂದು ಸ್ವತಂತ್ರವಾಯಿತು. ಕಾಸ್ಟ ರೀಕ ಮೊದಲು ಮೆಕ್ಸಿಕೋ ರಾಜ್ಯದೊಂದಿಗೆ ಸೇರಿದರೂ ತರುವಾಯ ಮಧ್ಯ ಅಮೆರಿಕ ರಾಜ್ಯಗಳ ಒಕ್ಕೂಟವನ್ನು ಸೇರಿತು. ಕೊನೆಗೆ ಆ ದೇಶಗಳ ರಾಜಕೀಯದಿಂದ ಹೊರಬಂದು ಪ್ರತ್ಯೇಕ ಧೋರಣೆ ತಳೆಯಿತು. ಸ್ವಾತಂತ್ರಯದ ಪ್ರಾರಂಭ ಕಾಲದಲ್ಲಿ ಉದಾರ ಪಕ್ಷ ಮತ್ತು ಸಂಪ್ರದಾಯ ಪಕ್ಷ ಎಂಬ ಎರಡು ಪಕ್ಷಗಳು ಹುಟ್ಟಿಕೊಂಡುವು. ಪ್ರಾಂತೀಯ ವಿರಸಗಳು ಉದ್ಭವಿಸಿದುವು. 1827ರಲ್ಲಿ ನಡೆದ ಒಳಯುದ್ಧದ ಪರಿಣಾಮವಾಗಿ ರಾಜಧಾನಿಯನ್ನು ಕಾರ್ಟಾಗೋದಿಂದ ಸಾನ್ ಓಸೇ ನಗರಕ್ಕೆ ವರ್ಗಾಯಿಸಲಾಯಿತು. ನಾಲ್ಕು ವರ್ಷಗಳಿಗೊಮ್ಮೆ ರಾಜಧಾನಿಯನ್ನು ಒಂದು ಪಟ್ಟಣದಿಂದ ಇನ್ನೊಂದಕ್ಕೆ ಸರದಿಯಂತೆ ಬದಲಿಸಬೇಕೆಂಬ ಸಲಹೆ 1834ರಲ್ಲಿ ಬಂದಿತ್ತು. ಆದರೆ ಸಾನ್ ಓಸೇ ಶೀಘ್ರವಾಗಿ ಬೆಳೆಯಲಾರಂಭಿಸಿದ್ದರಿಂದ ನಗರಗಳ ನಡುವಣ ಈ ಪೈಪೋಟಿ ನಿಂತುಹೋಯಿತು.

 ಕಾಸ್ಟ ರೀಕ ಮತ್ತು ನಿಕರಾಗ್ವ ರಾಜ್ಯಗಳೆರಡೂ ಸಾನ್‍ವಾನ್ ನದಿಯ ನೀರಿನ ಬಳಕೆಯ ಬಗ್ಗೆ ವಿವಾದಗಳಲ್ಲಿ ತೊಡಗಿದ್ದುವು. ನಿಕರಾಗ್ವದ ದೊಡ್ಡ ಪ್ರಾಂತ್ಯಗಳಲ್ಲೊಂದಾದ ಗ್ವಾನಕ್ಯಾಸ್ಟ ಆ ರಾಜ್ಯದಿಂದ ಹೊರಬಂದು ಕಾಸ್ಟ ರೀಕ ರಾಜ್ಯವನ್ನು ಸೇರಿಕೊಂಡಾಗ ವಿವಾದ ಹೆಚ್ಚಿತು. ಆದರೂ 1855ರಲ್ಲಿ ನಿಕರಾಗ್ವ ರಾಜ್ಯವನ್ನು ವಿಲಿಯಂ ವಾಕರ್ ಎಂಬಾತ ಆಕ್ರಮಿಸಲು ಬಂದಾಗ, ಕಾಸ್ಟ ರೀಕ ಆ ರಾಜ್ಯಕ್ಕೆ ನೆರವಾಗಿ ನಿಂತಿತು.

 ಅಧ್ಯಕ್ಷ ಜನರಲ್ ಥಾಮಸ್ ಗ್ವಾರ್ಡಿಯನ ಕಾಲದಲ್ಲಿ ಕಾಸ್ಟ ರೀಕ ಪ್ರಗತಿ ಹೊಂದಿತು. ಸರ್ವಾಧಿಕಾರಿ ವಿಧಾನಗಳನ್ನು ಬಳಸಿ ಅವನು ದೇಶದ ಸಕ್ಕರೆ ಮತ್ತು ಕಾಫಿ ವ್ಯಾಪಾರವನ್ನು ಹೆಚ್ಚಿಸಿದ. ಶಾಲೆಗಳ ನಿರ್ಮಾಣಕ್ಕೆ ಭಾರಿ ಕಾರ್ಯಕ್ರಮ ಯೋಜಿತವಾಯಿತು; 1870-1880ರಲ್ಲಿ ರೈಲು ಮಾರ್ಗಗಳ ನಿರ್ಮಾಣವಾಯಿತು. 1871ರಲ್ಲಿ ಅಂಗೀಕೃತವಾದ ಹೊಸ ಸಂವಿಧಾನ 1949ರ  ವರೆಗೆ ಮುಂದುವರಿಯಿತು. ಈ ಸಂವಿಧಾನದಲ್ಲಿ  ಧಾರ್ಮಿಕ ಸಹನೆಗೆ ಅವಕಾಶ ನೀಡಲಾಗಿತ್ತು. ಕಡ್ಡಾಯ ಶಿಕ್ಷಣ ಕಾನೂನು ಜಾರಿಗೆ ಬಂದದ್ದು 1886ರಲ್ಲಿ. 1890ರಲ್ಲಿ  ನಿಜವಾದ ಪ್ರಜಾಸತ್ತಾತ್ಮಕ ಚುನಾವಣೆ ನಡೆದು ಓಸೇ ಜಾಕ್ವಿನ್ ರೋಡ್ರಿಕ್ವೆeóï ಅಧ್ಯಕ್ಷನಾದ.

 ಅಮೆರಿಕ ಸಂಯುಕ್ತ ಸಂಸ್ಥಾನ ಮಾಡಿಕೊಂಡ ಒಂದು ಒಪ್ಪಂದದ ಪ್ರಕಾರ ಸಾನ್ ವಾನ್ ನದಿಯನ್ನು ಅಂತರ ಸಾಗರ ಜಲಯಾನಕ್ಕಾಗಿ ಉಪಯೋಗಿಸಿಕೊಳ್ಳಲು ನಿಕರಾಗ ಅವಕಾಶ ನೀಡಿದಾಗ ಕಾಸ್ಟ ರೀಕ ದೇಶ ಇದನ್ನು ಪ್ರತಿಭಟಿಸಿತು. ಮಧ್ಯ ಅಮೆರಿಕ ನ್ಯಾಯಾಲಯದ ಮುಂದೆ ತನ್ನ ಹಕ್ಕನ್ನು ಪ್ರತಿಪಾದಿಸಿತು. ನ್ಯಾಯಾಲಯದ ತೀರ್ಪು ಕಾಸ್ಟ ರೀಕದ ಪರವಾಗಿತ್ತು. ನಿಕರಾಗ್ವ ಮತ್ತು ಅಮೆರಿಕ ಸಂಯುಕ್ತಸಂಸ್ಥಾನ ಅದನ್ನು ಒಪ್ಪಲು ನಿರಾಕರಿಸಿದುವು. ಕಾಸ್ಟ ರೀಕ ಮತ್ತು ಪನಾಮಾ ರಾಜ್ಯಗಳ ನಡುವಣ ಗಡಿ ಸಮಸ್ಯೆ 1941ರ ವರೆಗೆ ಇತ್ಯರ್ಥವಾಗಲಿಲ್ಲ. ಈ ಬಗ್ಗೆ ಮನಸ್ತಾಪಗಳು ಮುಂದುವರಿದು ಕೊನೆಗೆ ರಾಫೇಲ್ ಕಾಲ್ಡೆರೋನ್ ಗ್ವಾರ್ಡಿಯ ಅಧ್ಯಕ್ಷತೆಯಲ್ಲಿದ್ದ ಸರ್ಕಾರ ಪನಾಮಾ ರಾಜ್ಯದೊಂದಿಗೆ ತನ್ನ ಗಡಿಯನ್ನು ನಿರ್ಧರಿಸಿಕೊಂಡಿತು.

 1913ರಲ್ಲಿ ಕಾಸ್ಟ ರೀಕ ಮೊದಲ ಬಾರಿಗೆ ನೇರ ಚುನಾವಣೆ ನಡೆಸಿತು. ಯಾವ ಅಭ್ಯರ್ಥಿಯೂ ಬಹುಮತ ಪಡೆಯಲಿಲ್ಲವಾಗಿ ರಾಜ್ಯದ ಸಭೆ (ಕಾಂಗ್ರೆಸ್) ಅಲ್‍ಫ್ರೆಡೊ ಗೊಂಜಾಲೆಜûನನ್ನು ಅಧ್ಯಕ್ಷನನ್ನಾಗಿ ನೇಮಿಸಿತು. ಈತ ಮಾಡಿದ ತೆರಿಗೆ ಕಾನುನುಗಳ ತಿದ್ದುಪಡಿಗಳನ್ನೂ ಇನ್ನಿತರ ಸುಧಾರಣೆಗಳನ್ನೂ ಆತನ ಬೆಂಬಲಿಗ ಜನರಲ್ ಫ್ರೆಡೆರಿಕೊ ಟಿನೋಕೊ ಖಂಡಿಸಿ, ಜನವರಿ 1917ರಲ್ಲಿ ಬಂಡಾಯ ನಡೆಸಿದ; ಕ್ರಾಂತಿಯಿಂದ ಆತ ಸ್ಥಾಪಿಸಿದ ಸರ್ಕಾರವನ್ನು ಅಮೆರಿಕ ಸಂಯುಕ್ತಸಂಸ್ಥಾನ ಅಂಗೀಕರಿಸಲಿಲ್ಲ. ಅವನ ಆಡಳಿತ ಜನಪ್ರಿಯವಾಗಲಿಲ್ಲ; ದಂಗೆಗಳೆದ್ದುವು. 1919ರಲ್ಲಿ ಆತ ದೇಶತ್ಯಾಗ ಮಾಡಿದ. ತರುವಾಯ ಜೂಲಿಯೋ ಅಕಾಸ್ಟ ಅಧ್ಯಕ್ಷನಾಗಿ ಚುನಾಯಿತನಾದ. ಅಮೆರಿಕ ಖಂಡಗಳಲ್ಲೇ ಅತ್ಯಂತ ಶ್ರೇಷ್ಠವಾದ ಹಾಗೂ ವಿಧಿಬದ್ಧವಾದ ಪ್ರಜಾಸತ್ತೆಯೆಂದು ಕಾಸ್ಟ ರೀಕ ಹೆಸರು ಗಳಿಸಿತು. 1925ರಲ್ಲಿ ಮತದಾರರಿಗೆ ಓದು ಬರಹದ ಪರೀಕ್ಷೆ ನಡೆಸುವ ಕ್ರಮವನ್ನೂ ರಹಸ್ಯಮತದಾನ ಪದ್ಧತಿಯನ್ನೂ ಜಾರಿಗೆ ತರಲಾಯಿತು. ಎರಡನೆಯ ಮಹಾಯುದ್ಧ ಕಾಲದಲ್ಲಿ ಜಪಾನ್, ಜರ್ಮನಿ ಮತ್ತು ಇಟಲಿಗಳ ಮೇಲೆ ಈ ದೇಶ ಯುದ್ಧ ಘೋಷಿಸಿತ್ತು (1941).

 1948ರಲ್ಲಿ ಕಾಸ್ಟ ರೀಕದಲ್ಲಿ ಒಂದು ಬಿಕ್ಕಟ್ಟು ಸಂಭವಿಸಿತ್ತು. ಕ್ರಮಬದ್ಧವಾಗಿ ಚುನಾಯಿತನಾದ ಒಟಿಲಿಯೊ ಉಲೇಟೆಯನ್ನು ಅಧಿಕಾರದಿಂದ ಉರುಳಿಸಲು ಸಾಮ್ಯವಾದಿಗಳು ಪ್ರಯತ್ನಿಸಿದರು. ಆದರೆ, ಜೋಸ್ ಫಿಗ್ವೆರ್ಸ್ ಎಂಬವನು ದಂಗೆಯನ್ನಡಗಿಸಿ ಅಧಿಕಾರವನ್ನು ಉಲೇಟಿಗೆ ವಹಿಸಿಕೊಟ್ಟ. 1949ರಲ್ಲಿ ಹೊಸ ಸಂವಿಧಾನವೊಂದು ಅಂಗೀಕೃತವಾಯಿತು. ಉಲೇಟಿಯ ತರುವಾಯ ಅಧ್ಯಕ್ಷನಾದ ಫಿಗ್ವೆರ್ಸನ ಕಾಲದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವಾಯಿತು. ಇತರ ಉದ್ಯಮಗಳನ್ನು ರಾಷ್ಟ್ರೀಕರಿಸುವ ಸೂಚನೆಗಳಿದ್ದುವು. 1958ರಲ್ಲಿ ಅಧ್ಯಕ್ಷನಾದವನು ಎಚಾಂಡಿ ಜಿಮೇನೆeóï. ಈತನ ತರುವಾಯ 1962ರಲ್ಲಿ ಬಂದ ಅಧ್ಯಕ್ಷ ಫ್ರಾನ್ಸಿಸ್ಕೊ ಜೆ. ಓರ್ಲಿಚ್. ಅವನ ಅನಂತರ ಜೋಸೆ ಜೋಕ್ವಿನ್ ಟ್ರೆಜೋಸ್ ಫರ್ನಾಂಡೆeóï ಅಧ್ಯಕ್ಷನಾದ.

 ಆಡಳಿತ ವ್ಯವಸ್ಥೆ : ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಂದ ಕೂಡಿದ ಏಕಾತ್ಮಕ ರಾಜ್ಯವ್ಯವಸ್ಥೆಗೆ 1949ರ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. 1871ರ ಸಂವಿಧಾನದ ಮೇರೆಗೆ ಮಂತ್ರಿಗಳು ಶಾಸನ ಸಭೆಯಲ್ಲಿ ಹಾಜರಾದರೂ ಮತನೀಡುವ ಅಧಿಕಾರ ಹೊಂದಿರಲಿಲ್ಲ. ಮಂತ್ರಿಗಳನ್ನು ಶಾಸನ ಸಭೆಯ ಮುಂದೆ  ಕಡ್ಡಾಯವಾಗಿ ಹಾಜರು ಪಡಿಸಲು ಮತ್ತು ಅವರನ್ನು ಪ್ರಶ್ನಿಸಿ ಖಂಡಿಸಲು 1949ರ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಯಿತು. ಕಾಸ್ಟ ರೀಕದ ಏಕಸದನದ ಶಾಸನ ಸಭೆಯಲ್ಲಿ 45 ಮಂದಿ ಸದಸ್ಯರಿದ್ದಾರೆ. ಅವರ ಅಧಿಕಾರಾವಧಿ 4 ವರ್ಷ. ಇಬ್ಬರನ್ನು ಅಧ್ಯಕ್ಷಸ್ಥಾನಕ್ಕೆ ಹೆಸರಿಸುತ್ತಾರೆ. ಅಧ್ಯಕ್ಷಸ್ಥಾನಕ್ಕೆ ನಿಲ್ಲುವ ಅಭ್ಯರ್ಥಿ ಕೊನೆಯ ಪಕ್ಷ ಸೇಕಡ 45ರಷ್ಟು ಸಾರ್ವತ್ರಿಕ ಮತ ಪಡೆಯದಿದ್ದರೆ ನಿರ್ಣಾಯಕ ಚುನಾವಣೆ ನಡೆಯುತ್ತದೆ. 1949ರಿಂದಲೂ ಸ್ತ್ರೀ-ಪುರುಷರಿಗೆ ಮತದಾನದ ಹಕ್ಕಿದೆ. ಸಾನ್ ಓಸೇ ನಗರದಲ್ಲಿ ಆಡಳಿತಕ್ಕೆ ಸಂಬಂಧಪಟ್ಟ ಪ್ರೌಢಶಾಲೆಯೊಂದರ ಸ್ಥಾಪನೆಯಾಗಿದೆ. ಆಡಳಿತದ ಸೌಕರ್ಯಕ್ಕಾಗಿ ರಾಜ್ಯವನ್ನು ಆಲಾಹ್ವೇಲಾ, ಕಾರ್ಟಾಗೊ, ಗೌನಾಕಾಸ್ಟೆ, ಎರೇದ್ಯ, ಲಿಮಾನ್, ಪೂಂಟಾರೇನಾಸ್ ಮತ್ತು ಸಾನ್ ಓಸೇ ಎಂಬ ಏಳು ಪ್ರಾಂತ್ಯಗಳಾಗಿ ವಿಂಗಡಿಸಲಾಗಿದೆ. ನ್ಯಾಯಾಡಳಿತ ಕೇಂದ್ರೀಕೃತವಾಗಿದೆ. ಪರಮೋಚ್ಚ ನ್ಯಾಯಾಲಯವನ್ನು ಶಾಸನಸಭೆ ನೇಮಿಸುತ್ತದೆ. ಅಪೀಲು ನ್ಯಾಯಾಲಯಗಳನ್ನೂ ಇತರ ನ್ಯಾಯಾಲಯಗಳನ್ನೂ ಪರಮೋಚ್ಚ ನ್ಯಾಯಾಲಯವೇ ನೇಮಕ ಮಾಡುತ್ತದೆ. 

 ಲ್ಯಾಟಿನ್ ಅಮೆರಿಕದಲ್ಲೆಲ್ಲ ಈ ದೇಶ ಉತ್ತಮ ಶಿಕ್ಷಣ ಪ್ರಗತಿ ಸಾಧಿಸಿದೆ. 1959ರ ಜನಗಣತಿಯ ಮೇರೆಗೆ ಸೇಕಡ 79.1ಮಂದಿ ಅಕ್ಷರಸ್ಥರಿದ್ದರು. 1960ರಲ್ಲಿ 1,98,000 ವಿದ್ಯಾರ್ಥಿಗಳು ಸರ್ಕಾರಿ ಪ್ರೈಮರಿ ಶಾಲೆಗಳಲ್ಲೂ 8,000 ವಿದ್ಯಾರ್ಥಿಗಳು ಖಾಸಗಿ ಪ್ರೈಮರಿ ಶಾಲೆಗಳಲ್ಲೂ ಇದ್ದರು; ಪ್ರೌಢ ಶಿಕ್ಷಣದಲ್ಲಿ 27,000 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲೂ, 5,000 ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲೂ ವ್ಯಾಸಂಗ ಮಾಡುತ್ತಿದ್ದರು. ಕಾಸ್ಟ ರೀಕ ವಿಶ್ವವಿದ್ಯಾಲಯದಲ್ಲಿ 4,700 ವಿದ್ಯಾರ್ಥಿಗಳಿದ್ದರು. ಈ ವಿಶ್ವವಿದ್ಯಾಲಯದಲ್ಲಿ ಹತ್ತು ಶಿಕ್ಷಣ ವಿಭಾಗಗಳಿವೆ. ಇಲ್ಲಿಯ ಶಿಕ್ಷಣ ಯೂರೋಪ್ ದೇಶಗಳ ಶಿಕ್ಷಣ ಕ್ರಮವನ್ನು ಹೋಲುತ್ತದೆ.

 ಕಾರ್ಮಿಕರು ಹಾಗೂ ಸಮಾಜ ಕಲ್ಯಾಣ : ಈ ರಾಜ್ಯದಲ್ಲಿ ಸಾಮಾಜಿಕ ವಿಮಾ ವ್ಯವಸ್ಥೆಯುಂಟು. ಇದರ ಅಡಿಯಲ್ಲಿ ಹಣದ ನೆರವು. ವೈದ್ಯಸೌಲಭ್ಯ, ಪ್ರಸೂತಿಕಾಲದ ನೆರವು, ಆಶ್ರಿತರ ರಕ್ಷಣೆ-ಈ ಯೋಜನೆಗಳಿವೆ. ಕಾರ್ಮಿಕ ಪರಿಹಾರ ಕಾನೂನೂ ಜಾರಿಯಲ್ಲಿದೆ. ವೈದ್ಧಾಪ್ಯ ವಿಮಾ ವ್ಯವಸ್ಥೆಯುಂಟು. ವ್ಯವಸ್ಥಿತವಾದ ರೀತಿಯಲ್ಲಿ ಹಕ್ಕುಗಳ ಸಾಧನೆಗೂ ಮುಷ್ಕರಗಳಿಗೂ 1943ರ ಕಾಯಿದೆಯಲ್ಲಿ ಅವಕಾಶವುಂಟು. ಕಾರ್ಮಿಕ ಮತ್ತು ಉದ್ಯಮಿಗಳ ನಡುವಣ ವಿವಾದಗಳ ತೀರ್ಪಿಗೆ ಮಧ್ಯಸ್ಥಿಕೆ ನ್ಯಾಯಾಲಯಗಳುಂಟು.

 ಕಾಸ್ಟ ರೀಕ ಜನರಲ್ಲಿ 97.6%ರಷ್ಟು ಮಂದಿ ಬಿಳಿಯರು ಇಲ್ಲವೆ ಮೆಸ್ಟಿeóÉೂ ಜನ. ಪ್ರಾರಂಭದಲ್ಲಿ ಈ ದೇಶಕ್ಕೆ ಬಂದ ಸ್ಪೇನ್ ದೇಶೀಯರು ಎಸ್ಟ್ರೆಮಡೂರ ಮತ್ತು ಆಂಡಲೂಸಿಯ ಜಿಲ್ಲೆಗಳಿಂದ ಬಂದರು. ತರುವಾಯ ಕ್ಯಾಸ್ಟೈಲಿನಿಂದ ಬಂದ ಜನ ಇವರನ್ನು ಕೂಡಿಕೊಂಡರು. ಮೂಲವಾಸಿಗಳಾದ ಇಂಡಿಯನ್ ಜನರ ಸಂಖ್ಯೆ 1956ರಲ್ಲಿ 4,000 ಇತ್ತು; ಇಂಡಿಯನರು ದೂರದ ಬೆಟ್ಟಗಳಲ್ಲಿ ವಾಸಮಾಡುತ್ತಾರೆ. ವ್ಯವಸಾಯಕ್ಕಾಗಿ ಕರೆತಂದ ನೀಗ್ರೋಗಳು ಒಟ್ಟು ಜನಸಂಖ್ಯೆಯ ಸೇಕಡ 2ರಷ್ಟು ಇದ್ದಾರೆ. ಇವರು ತೀರ ಪ್ರದೇಶದ ಬಾಳೆತೋಟಗಳಲ್ಲಿ ಕೆಲಸಮಾಡುತ್ತಾರೆ. ಮೂಲನಿವಾಸಿಗಳಾದ ಇಂಡಿಯನ್ ಜನರ ಹೊರತು ಉಳಿದವರು ಸ್ಪ್ಯಾನಿಷ್ ಭಾಷೆಯನ್ನಾಡುತ್ತಾರೆ. ಶಿಕ್ಷಣದಲ್ಲಿ ಫ್ರೆಂಚ್ ದ್ವಿತೀಯ ಪಠ್ಯವಿಷಯವಾಗಿತ್ತು; ಈಗ ಇಂಗ್ಲಿಷ್ ಅದರ ಸ್ಥಾನವನ್ನು ಪಡೆದುಕೊಂಡಿದೆ.

 ಕಾಸ್ಟ ರೀಕ ಜನರಲ್ಲಿ ಸೇಕಡ 90 ಮಂದಿ ರೋಮನ್ ಕೆಥೊಲಿಕರು. ದೇಶದ ಮೂಲ ವಾಸಿಗಳಾದ ಇಂಡಿಯನರ ಜಾನಪದ ಸಂಸ್ಕøತಿ-ಕಲೆಗಳ ಸಂಪರ್ಕವಿಲ್ಲದೆ ಈ ಧರ್ಮ ಬೆಳೆದು ಬಂದಿದೆ.

 ಕಾಸ್ಟ ರೀಕ ಜನ ತಮ್ಮ ಸಂಸ್ಕøತಿಯನ್ನು ಸ್ಪೇನ್ ದೇಶದ ಕೆಥೋಲಿಕ್ ಪದ್ಧತಿಗಳಿಗನುಸಾರವಾಗಿ ರಕ್ಷಿಸಿಕೊಂಡು ಬಂದಿದ್ದಾರೆ. ಇದು ವಿಶಿಷ್ಟ ರಾಷ್ಟ್ರೀಯ ಸ್ವಭಾವ ತಾಳಿದೆ. ಕುಟುಂಬ ಬಾಂಧವ್ಯ, ಸಾಂಪ್ರದಾಯಿಕ ಪದ್ಧತಿಗಳ ಆಚರಣೆ, ಕ್ರಿಸ್‍ಮಸ್ ವಾರದ ಮೆರವಣಿಗೆ, ವಾರ್ಷಿಕ ಹಬ್ಬಗಳು-ಇವು ಕಾಸ್ಟ ರೀಕನರ ಸಂಸ್ಕøತಿಯ ವೈಶಿಷ್ಟ್ಯ.

 ಜಾನಪದ ಹೆಚ್ಚು ಅಭಿವೃದ್ಧಿ ಹೊಂದಿದ್ದರೂ ಗ್ರಾಮೀಣ ಸಂಸ್ಕøತಿ ಕಾಸ್ಟ ರೀಕ ಜನರ ಜೀವನಕ್ಕನುಗುಣವಾಗಿದೆ. ರಿಟ್ರೀಟ್ ಸಮಾರಂಭದಲ್ಲಿ ಸ್ತ್ರೀಪುರುಷರ ಭೇಟಿಗೆ ಅವಕಾಶವುಂಟು.

 ಕಾಲ್ಚೆಂಡು ಕಾಸ್ಟ ರೀಕದ ರಾಷ್ಟ್ರಕ್ರೀಡೆ. ಬ್ಯಾಸ್ಕೆಟ್‍ಬಾಲ್, ಮುಷ್ಟಿಕಾಳಗ, ಬೇಸ್‍ಬಾಲ್, ಗಾಲ್ಫ್, ಟೆನಿಸ್ ಮತ್ತು ಈಜು-ಇವೂ ಜನಪ್ರಿಯವಾಗಿವೆ.

 ಅರ್ಥವ್ಯವಸ್ಥೆ : ವ್ಯವಸಾಯೋತ್ಪನ್ನಗಳು, ಅವುಗಳ ಪರಿಷ್ಕರಣ ಇವುಗಳ ಆಧಾರದ ಮೇಲೆ ಕಾಸ್ಟ ರೀಕದ ಆರ್ಥಿಕ ಪ್ರಗತಿಯಾಗಿದೆ. ಬಾಳೆ ಮತ್ತು ಕಾಫಿ ಹೇರಳವಾಗಿ ಬೆಳೆಯುತ್ತವೆ. ಅರಣ್ಯಗಳಲ್ಲಿ ಸಿಗುವ ಸೀಡಾರನ್ನೂ ಪ್ಲೈವುಡ್ ತಯಾರಿಕೆಗೆ ಉಪಯೋಗವಾಗುವ ಕಾಟಿವೊ ಮರವನ್ನೂ ಕಡಿದು ರಫ್ತು ಮಾಡುತ್ತಾರೆ. ಇಂಟರ್-ಅಮೆರಿಕನ್ ಇನ್‍ಸ್ಪಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಸೈನ್ಸ್ ಎಂಬ ಕೃಷಿ ಅಧ್ಯಯನ ಸಂಸ್ಥೆಯೊಂದು ಟೂರ್ಯಾಲಾವ ನಗರದಲ್ಲಿದೆ. ಜೇಡಿ ಮಣ್ಣು, ಸಿಮೆಂಟು ತಯಾರಿಕೆಯ ವಸ್ತುಗಳು. ಚಿನ್ನ, ಉಪ್ಪು, ಗಂಧಕ-ಇವು ಕಾಸ್ಟ ರೀಕದಲ್ಲಿ ಸಿಕ್ಕುತ್ತವೆ. ಈ ರಾಜ್ಯದಲ್ಲಿ ವಾರ್ಷಿಕವಾಗಿ 4,50,000 ಪೌಂಡುಗಳಷ್ಟು ಮೀನು ಹಿಡಿಯುತ್ತಾರೆ.

 ಕಾಸ್ಟ ರೀಕದಿಂದ ಬಾಳೆ, ಕೋಕೋ ಅಬೆಕ, ಜಾನುವಾರು ಮತ್ತು ಅರಣ್ಯ ವಸ್ತುಗಳು ರಫ್ತಾಗುತ್ತವೆ; ಮುಖ್ಯ ಗ್ರಾಹಕ ರಾಷ್ಟ್ರಗಳು ಅಮೆರಿಕ ಸಂಯುಕ್ತಸಂಸ್ಥಾನ, ಜರ್ಮನಿ, ಕೆನಡ ಮತ್ತು ನೆದರ್ಲೆಂಡ್ಸ್. ಮೋಟಾರುಗಳು ಹಾಗೂ ಯಂತ್ರೋಪಕರಣಗಳನ್ನು ಇದು ಆಮದು ಮಾಡಿಕೊಳ್ಳುತ್ತದೆ.

 ಕಾಸ್ಟ ರೀಕದ ನಾಣ್ಯ ಕೊಲೋನ್. ಕಾಸ್ಟ ರೀಕ ಕೇಂದ್ರೀಯ ಬ್ಯಾಂಕು ಹಣಕಾಸಿನ ನೀತಿಯನ್ನೂ ವಿದೇಶಿ ವಿನಿಮಯವನ್ನೂ ನಿರ್ದೇಶಿಸುತ್ತದೆ.

 ಸಾರಿಗೆ ಸಂಪರ್ಕ, ಪಟ್ಟಣಗಳು : 1960ರ ದಶಕದಲ್ಲಿದ್ದ ಮೋಟಾರು ವಾಹನಗಳ ಸಂಖ್ಯೆ 30,000. ರೈಲುಮಾರ್ಗದಲ್ಲಿ ಬಹುಭಾಗ ಖಾಸಗಿ ಪ್ಲಾಂಟೇಷನ್ ಕಂಪನಿಗಳಿಗೆ ಸೇರಿದೆ. ಸರ್ಕಾರದ ಒಡೆತನಕ್ಕೆ ಸೇರಿದ್ದು 198 ಮೈ. ಮಾತ್ರ.

 ಕಾಸ್ಟ ರೀಕದ ಹೆದ್ದಾರಿಗಳ ನಿರ್ಮಾಣಕ್ಕಾಗಿ ವಿಶ್ವ ಬ್ಯಾಂಕ್ ಮತ್ತು ಅಂತರ ರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ ನೆರವು ನೀಡಿವೆ. ಕಾಸ್ಟ ರೀಕದಲ್ಲಿ ವಿಮಾನಮಾರ್ಗಗಳೂ ಉಂಟು. ಸಾನ್ ಓಸೇಯಿಂದ ಮುಖ್ಯ ಪಟ್ಟಣಗಳಿಗೆ ವಿಮಾನ ಸಂಪರ್ಕವುಂಟು.

 ಕಾಸ್ಟ ರೀಕದ ರಾಜಧಾನಿಯಾದ ಸಾನ್ ಓಸೇಯ ಜನಸಂಖ್ಯೆ 1,01,162 (1963). ಇತರ ಪಟ್ಟಣಗಳಿವು: ಅಲಾಹ್ವೇಲಾ (19,620), ಕಾರ್ಟಾಗೊ (18,084), ಲೈಬೀರಿಯ (6,087), ಹೆರೀಡಿಯ (19,249), ಲಿಮಾನ್ (19,432) ಮತ್ತು ಪೂಂಟಾರೇನಾಸ್ (19,582).

  (ವಿ.ಜಿ.ಕೆ.; ಜಿ.ಇ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ